ಆಧಾರಗೆರೆ

	ನೆಲದ ಸರ್ವೆಗೆ ತೊಡಗುವ ಮೊದಲು ಗುರುತಿಸುವ ಸಮತಲದೂರದ ಅತಿಮುಖ್ಯವಾದ ಗೆರೆ (ಬೇಸ್ ಲೈನ್). ಎರಡು ಬಿಂದುಗಳ ಮಧ್ಯೆ ಇರುವ ಸಮತಲದೂರವನ್ನು ಕರಾರುವಾಕ್ಕಾಗಿ ಸ್ಥಾಪಿಸುವುದೇ ಈ ಅಳತೆಯ ಉದ್ದೇಶ. ಆಧಾರಗೆರೆ ಸಾಧ್ಯವಾದ ಮಟ್ಟಿಗೂ ಸಮತಲವಾದ ಭೂಪ್ರದೇಶದಲ್ಲಿ ಹಾದುಹೋಗುವಂತಿದ್ದರೆ ಒಳ್ಳೆಯದು. ಏಕೆಂದರೆ ಅದರಿಂದ ಅಳತೆ ಕರಾರುವಾಕ್ಕಾಗಿಯೂ ಸುಲಭವಾಗಿಯೂ ಆಗುವುದು. ತ್ರಿಕೋಣಾಕಾರದಲ್ಲಿ ಸರ್ವೆ ಮಾಡುವಾಗ ಆಧಾರಗೆರೆಯನ್ನು ಅತಿ ನಿಖರವಾಗಿ ಅಳೆಯಬೇಕಾದುದು ಆವಶ್ಯಕ. ಮಿಶ್ರಲೋಹದ ಟೇಪಿನಿಂದ ಅಳೆಯುವಾಗ ಅದು ಜೋತುಬೀಳದ ರೀತಿಯಲ್ಲಿ ಅದನ್ನು ಅಲ್ಲಲ್ಲಿ ಭದ್ರಪಡಿಸಿ ಸಮಾನವಾದ ಎತ್ತರದಲ್ಲಿರುವಂತೆ ವ್ಯವಸ್ಥೆಮಾಡಬೇಕು. ಇಂಥ ಟೇಪನ್ನು ತಯಾರಿಸುವಾಗ ಎಷ್ಟರಮಟ್ಟಿನ ಎಳೆತಕ್ಕೆ ಅದನ್ನು ಗುರಿಪಡಿಸಲಾಗಿತೋ ಅಷ್ಟೇ ಪ್ರಮಾಣದ ಎಳೆತಕ್ಕೆ ಅದನ್ನು ಖಚಿತಗೊಳಿಸಲು ಅದರ ಎರಡೂ ತುದಿಯಲ್ಲೂ ಸ್ಪ್ರಿಂಗ್ ತಕ್ಕಡಿಯನ್ನು ಉಪಯೋಗಿಸಿ ಉಷ್ಣತೆಯನ್ನು ಗುರುತಿಸಲು ಉಷ್ಣಮಾಪಕವನ್ನು ಉಪಯೋಗಿಸಿ ಉಷ್ಣತೆಯ ವ್ಯತ್ಯಾಸಕ್ಕೆ ಅನುಗುಣವಾಗಿ ಅಳತೆಯನ್ನು ಸರಿಪಡಿಸಿಕೊಳ್ಳಬೇಕು.
(ಕೆ.ಸಿ.ಆರ್.)
(ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ